ಉತ್ತರಖಂಡದಲ್ಲಿ ನಡೆದ ರಾಷ್ಟ್ರಮಟ್ಟದ ಎನ್‍ಸಿಸಿ ಕ್ಯಾಂಪ್‍

ಉತ್ತರಖಂಡ ರಾಜ್ಯದ ರಾಣಿಭಾಗ್ ಎಂಬಲ್ಲಿ ನಡೆದ ರಾಷ್ಟ್ರಮಟ್ಟದ ಏಕ್‍ಭಾರತ್ ಶ್ರೇಷ್ಟಭಾರತ್ ಎನ್‍ಸಿಸಿ ಕ್ಯಾಂಪ್‍ಗೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಶೇನ್ ಜೋಸೆಫ್ ಹಾಗೂ ಮಹಾಲಸಾ ಪೈಯವರು ಭಾಗವಹಿಸಿದ್ದಾರೆ.

ನವೆಂಬರ್ 12ರಿಂದ 23ರವರೆಗೆ ನಡೆದ ಈ ಕ್ಯಾಂಪ್‍ನಲ್ಲಿ ಕರ್ನಾಟಕ-ಗೋವಾ ಎನ್‍ಸಿಸಿ ಡೈರಕ್ಟರೇಟ್ ಮೂಲಕ ಇವರೀರ್ವರು ಪ್ರತಿನಿಧಿಸಿದವರಾಗಿದ್ದಾರೆ. ಎನ್‍ಸಿಸಿ ಗ್ರೂಪ್ಸ್ ಹೆಡ್‍ಕ್ವಾರ್ಟರ್ ನೈನಿತಾಲ್ ಇವರು ಆಯೋಜಿಸಿರುವ ಈ ಕ್ಯಾಂಪ್ ಉತ್ತರಖಂಡ ರಾಜ್ಯದ ಒಂಭತ್ತು ವಿವಿಧ ಸ್ಥಳಗಳಲ್ಲಿ ನಡೆಯುತ್ತಿದ್ದು, ಶೇನ್ ಹಾಗೂ ಮಹಾಲಸಾರವರು ಭಾಗವಹಿಸಿರುವ ಕ್ಯಾಂಪ್ ಎರಡನೇ ಹಂತದ್ದಾಗಿದೆ.

600ರಲ್ಲಿ ಫಿಲೋಮಿನಾದ ಈರ್ವರು:

ಭಾರತದಾದ್ಯಂತ ಸುಮಾರು 600 ಎನ್‍ಸಿಸಿ ಕೆಡೆಟ್‍ಗಳು ಉತ್ತರಖಂಡದಲ್ಲಿ ನಡೆಯುತ್ತಿರುವ ಕ್ಯಾಂಪ್‍ನಲ್ಲಿ ಭಾಗವಹಿಸುತ್ತಿದ್ದು, ಕರ್ನಾಟಕ-ಗೋವಾ ಡೈರೆಕ್ಟರೇಟ್‍ನಿಂದ 97 ಕೆಡೆಟ್‍ಗಳು ಭಾಗವಹಿಸಿದ್ದಾರೆ. ಪುತ್ತೂರಿನಿಂದ ಫಿಲೋಮಿನಾದ ಶೇನ್ ಜೋಸೆಫ್ ಹಾಗೂ ಮಹಾಲಸಾ ಪೈ ಅವರಲ್ಲದೆ ವಿವೇಕಾನಂದ ಕಾಲೇಜ್‍ನ ಈರ್ವರು ಕೆಡೆಟ್‍ಗಳು ಈ ಪ್ರತಿಷ್ಠಿತ ಕ್ಯಾಂಪ್‍ನಲ್ಲಿ ಭಾಗವಹಿಸಿರುತ್ತಾರೆ. ಶೇನ್ ಹಾಗೂ ಮಹಾಲಸಾರವರು ಕ್ಯಾಂಪ್‍ನಲ್ಲಿ ಗಮನಾರ್ಹ ಸಾಧನೆಗೈಯ್ದಿದ್ದು ಸಮೂಹ ಡ್ಯಾನ್ಸ್, ಸಮೂಹ ಗಾಯನ ಹಾಗೂ ಫ್ಲ್ಯಾಗ್ ಏರಿಯಾ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಸುಮಾರು 8 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲೂ ಇವರೀರ್ವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಮಹಾಲಸಾ ಪೈಯವರು ಪರ್ಲಡ್ಕ ನಿವಾಸಿ ದಿನೇಶ್ ಪೈ ಹಾಗೂ ನಗರಸಭಾ ಸದಸ್ಯೆ ದೀಕ್ಷಾ ಪೈಯವರ ಪುತ್ರಿ. ಶೇನ್ ಜೋಸೆಫ್‍ರವರು ಪಡೀಲ್ ನಿವಾಸಿ ಲ್ಯಾನ್ಸಿ ಡಿ’ಸೋಜ ಹಾಗೂ ಸರಿತಾ ಡಿ’ಸೋಜರವರ ಪುತ್ರ ಎಂದು ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಹಾಗೂ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.