ಫಿಲೋಮಿನಾ ಪಿಯು ಕಾಲೇಜ್‍ನಲ್ಲಿ ಧ್ಯಾನ ಶಿಬಿರ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದಿವ್ಯ ಚೇತನ ಅಸೋಶಿಯೇಶನ್ ವತಿಯಿಂದ ಮಾ.11 ರಂದು ದಿವ್ಯ ಚೇತನ ಚಾಪಲ್‍ನಲ್ಲಿ ಕಾಲೇಜಿನ ಕ್ರೈಸ್ತ ವಿದ್ಯಾರ್ಥಿಗಳಿಗೆ ಒಂದು ದಿನದ ಧ್ಯಾನ ಕೂಟವನ್ನು ಆಯೋಜಿಸಲಾಗಿತ್ತು.

ಧ್ಯಾನ ಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರು ಮಾತನಾಡಿ, ವಿದ್ಯಾರ್ಥಿಗಳು ಆಧ್ಯಾತ್ಮಕ ಶಕ್ತಿಯನ್ನು ತಮ್ಮ ಜೀವನದ ಅಂತರಂಗದಲ್ಲಿ ವೃದ್ಧಿಸಿಕೊಂಡಾಗ ಜೀವನ ಪರಿಪೂರ್ಣವೆನಿಸುತ್ತದೆ ಜೊತೆಗೆ ನಂಬಿಕೆ ಮತ್ತು ಕಾರ್ಯಗಳ ಸಮ್ಮಿಲನವಿದ್ದಾಗ ಮಾತ್ರ ನಾವು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ಜೀವನದಲ್ಲಿ ಯಾವಾಗಲೂ ಭಕ್ತಿ, ನಿರ್ಣಯ ಹಾಗೂ ಶಿಸ್ತನ್ನು ಅಳವಡಿಸಿದಾಗ ಮಾತ್ರ ನಮ್ಮ ಜೀವನವು ಪರಿಪೂರ್ಣವಾಗುವುದು ಎಂದರು.

ಬನ್ನೂರು ಸಂತ ಅಂತೋನಿ ಚರ್ಚ್‍ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‍ರವರು ಮಾತನಾಡಿ, ನಮ್ಮಲ್ಲಿರುವ ಅಶಕ್ತತೆಗಳನ್ನು ಮರೆತು ದೇವರು ನಮಗೆ ಅನುಗ್ರಹಿಸಿದ ಎಲ್ಲಾ ಸಾಮಥ್ರ್ಯಗಳನ್ನು ಗರಿಷ್ಟ ಮಟ್ಟದಲ್ಲಿ ಉಪಯೋಗಿಸುವ ಮೂಲಕ ಜೀವನವನ್ನು ಸಂತೋಷದಿಂದ ಬಾಳಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿರ್ಧಾರಗಳನ್ನು ಪರಾಮರ್ಶಿಸಿ, ತೀರ್ಮಾನಿಸಿ ಆಮೇಲೆ ಕಾರ್ಯಶೀಲರಾಗಬೇಕು ಎಂದರು.

ಫಿಲೋಮಿನಾ ಪದವಿ ಕಾಲೇಜ್‍ನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋ, ಫಿಲೋಮಿನಾ ಕಾಲೇಜು ಪುರುಷರ ವಸತಿನಿಲಯದ ವಾರ್ಡನ್ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಚೇತಕಿ ಫಿಲೋಮಿನಾ ಮೊಂತೇರೋ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರೀತಂ ಡಿ’ಸಿಲ್ವ, ಪ್ರೀಮಲ್ ರೋಶ್ನಿ ಪಿಂಟೋರವರು ಉಪಸ್ಥಿತರಿದ್ದರು.

ಧ್ಯಾನಕೂಟದ ಕೊನೆಯಲ್ಲಿ ದಿವ್ಯಬಲಿಪೂಜೆಯನ್ನು ಏರ್ಪಡಿಸಲಾಗಿದ್ದು ವಂ|ಪ್ರಶಾಂತ್ ಫೆರ್ನಾಂಡೀಸ್‍ರವರು ಪ್ರಧಾನ ಧರ್ಮಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಧ್ಯಾನಕೂಟದಲ್ಲಿ ಪಾಪನಿವೇದನೆಗೆ ಅವಕಾಶ ಮಾಡಿಕೊಡಲಾಗಿತ್ತು. ಉಪನ್ಯಾಸಕ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್

ಜೀವನದಲ್ಲಿ ಯಾವಾಗಲೂ ಶಿಸ್ತು, ಆಧ್ಯಾತ್ಮಿಕತೆ, ಭಾವನೆಗಳನ್ನು ಹಿಡಿತದಲ್ಲಿರಿಸಿದರೆ ಮಾತ್ರ ನಾವು ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಿ ಉತ್ತಮ ಪ್ರಜೆಯಾಗಿ ಬಾಳಬಹುದು. ನಾವೆಲ್ಲರೂ ದೇವರಿಂದ ಹಲವಾರು ವರಗಳನ್ನು ಪಡೆದಿದ್ದು, ಆವರಗಳನ್ನು ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ಜೀವಿಸಿ ಇತರರಿಗೆ ಮಾದರಿಯಾಗಬೇಕು. ದೇವರು ಮತ್ತು ಧರ್ಮದ ಆಚರಣೆಯಲ್ಲಿ ನಂಬಿಕೆಯನ್ನು ಹೊಂದಿದಾಗ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ. ನಾವು ಯೇಸುವಿನ ಅನುಯಾಯಿಯಾಗಲು ಅವರ ಮೇಲೆ ಅಚಲ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು,

-ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು