ಫಿಲೋಮಿನಾ ಪಿಯು ಕಾಲೇಜು ವಾರ್ಷಿಕೋತ್ಸವ-ಕೃತಜ್ಞತಾ ದಿವ್ಯ ಬಲಿಪೂಜೆ

ದೇವರಲ್ಲಿ ನಮ್ಮ ವಿಶ್ವಾಸವನ್ನು ಇಟ್ಟು ನಮ್ಮ ಕೆಲಸವನ್ನು ಮಾಡಿದಾಗ ಸಾಮಾನ್ಯರಾದ ನಾವು ಅಸಾಮಾನ್ಯವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ನಮ್ಮ ಪ್ರಾರ್ಥನೆ ಹಾಗೂ ಧ್ಯಾನವು ಕೇವಲ ತೋರಿಕೆಯ ಪ್ರಾರ್ಥನೆಯಾಗದೆ, ನಮ್ಮ ಅಂತರಾಳದಿಂದ ಪ್ರಾರ್ಥಿಸಿದಾಗ ಮಾತ್ರ ದೇವರು ಫಲವನ್ನು ನೀಡಬಲ್ಲ ಎಂದು ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಪ್ರಾಧ್ಯಾಪಕರಾಗಿರುವ ಕಲ್ಲಿಕೋಟೆ ಧರ್ಮಪ್ರಾಂತ್ಯದ ವಂ|ಅಲೆಕ್ಸಾಂಡರ್ ಕಲಾರಿಕಲ್‍ರವರು ಹೇಳಿದರು.
ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾರ್ಷಿಕೋತ್ಸವದ ಅಂಗವಾಗಿ ಕಾಲೇಜ್‍ನ ಚಾಪೆಲ್‍ನಲ್ಲಿ ಏರ್ಪಡಿಸಿದ ಕೃತಜ್ಞತಾ ದಿವ್ಯ ಬಲಿಪೂಜೆಯಲ್ಲಿ ಬೈಬಲ್ ವಾಚಿಸಿ ಸಂದೇಶ ನುಡಿದರು. ದೂರದ ಬೇರೆ, ಬೇರೆ ಪ್ರದೇಶದಿಂದ ವಿದ್ಯಾರ್ಜನೆಗೋಸ್ಕರ ಈ ಫಿಲೋಮಿನಾ ಸಂಸ್ಥೆಯನ್ನು ಆರಿಸಿಕೊಂಡಿರುವುದು ಉತ್ತಮ ವಿಚಾರ. ದೇವರನ್ನು ನಾವು ನಮ್ಮಲ್ಲಿ ಹೃದಯಪೂರ್ವಕವಾಗಿ ಸ್ವೀಕರಿಸದಿದ್ದರೆ ನಮ್ಮನ್ನು ಕ್ರಿಶ್ಚಿಯನ್ ಎನ್ನುವುದಕ್ಕೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸದಾ ಹೊಸತನವನ್ನು ಕಂಡುಹುಡುಕುವ ಕಾರ್ಯವನ್ನು ಮಾಡಿದಾಗ ಜ್ಞಾನದ ಸಂಪಾದನೆಯಾಗುತ್ತದೆ. ಪ್ರತಿಯೋರ್ವ ಮಾನವ ಕರುಣಾಮಯಿಯಾಗಿರುವ ದೇವರ ಸೃಷ್ಟಿಯಾಗಿದ್ದಾನೆ ಮಾತ್ರವಲ್ಲದೆ ಮಾನವನ ಜೀವನದಲ್ಲಿ ದೇವರು ಅನೇಕ ವಿಸ್ಮಯಗಳನ್ನು ಮಾಡುತ್ತಾನೆ ಎಂದ ಅವರು ಕಳೆದ 61 ವರ್ಷಗಳ ಇತಿಹಾಸವಿರುವ ಫಿಲೋಮಿನಾ ವಿದ್ಯಾಸಂಸ್ಥೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಾ ಬಂದಿದೆ. ಜೀವನದಲ್ಲಿ ಪ್ರಾಮಾಣಿಕತೆ, ಸಮಗ್ರತೆ, ಸಹಿಷ್ಣುತೆಗಳಂತಹ ಗುಣಗಳನ್ನು ಅಳವಡಿಸಿಕೊಂಡಾಗ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಅವರು ಹೇಳಿದರು.

ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಫಿಲೋಮಿನಾ ಪುರುಷರ ಹಾಸ್ಟೆಲ್ ವಾರ್ಡನ್ ವಂ|ರಿತೇಶ್ ರೊಡ್ರಿಗಸ್, ಫಿಲೋಮಿನಾ ಬಾಲಕರ ಹಾಸ್ಟೆಲ್ ವಾರ್ಡನ್ ವಂ|ಸುನಿಲ್ ಜಾರ್ಜ್ ಡಿ’ಸೋಜರವರು ವಿದ್ಯಾರ್ಥಿಗಳು ಹಾಗೂ ಬೋಧಕ-ಆಡಳಿತ ಸಿಬ್ಬಂದಿಗಳೊಂದಿಗೆ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.