ಜಿಲ್ಲಾ ಪ್ರೌಢಶಾಲಾ ವಿಭಾಗದ ಸ್ಪರ್ಧೆ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗಳನ್ನು ಎದುರಿಸಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಭೆ ಎನ್ನುವುದು ಎಲ್ಲರಲ್ಲೂ ಇದೆ. ಆದರೆ ತನ್ನಲ್ಲಿರುವ ಪ್ರತಿಭೆಯನ್ನು ಇತರ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಭರವಸೆಯೊಂದಿಗೆ, ಸಮಯವನ್ನು ವ್ಯರ್ಥಮಾಡಿಕೊಳ್ಳದೆ ಸವಾಲುಗಳೊಂದಿಗೆ ಮುನ್ನೆಡೆಯುವುದೇ ಪ್ರತಿಭೆಯ ನಿಜವಾದ ಅನಾವರಣ ಎಂದು ಪುತ್ತೂರು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಂಶುಪಾಲರಾದ ಪ್ರೊ|ಝೇವಿಯರ್ ಡಿ’ಸೋಜರವರು ಹೇಳಿದರು.

ಅವರು ಸೆ.7 ರಂದು ಮಾದೆ ದೇವುಸ್ ಸಮೂಹ ಶಿಕ್ಷಣಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಆಯೋಜಿಸಲಾದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಡುವ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಒಂದು ದಿನದ ಅಂತರ್-ಶಾಲಾ ಸ್ಪರ್ಧೆ ‘ಪ್ರತಿಭಾ 2017’ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧೆಗಳು ಬದುಕಿಗೆ ಬೇಕಾದ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಬಲ್ಲುದು. ಜೀವನದಲ್ಲಿ ಸ್ಪರ್ಧೆಗಳನ್ನು ಎದುರಿಸುವ ಸವಾಲು ಇದ್ದಾಗ ಜೀವನದಲ್ಲಿ ಹೊಸ ಮಜಲುಗಳನ್ನು ತಲುಪುವುದಕ್ಕೆ ಸಾಧ್ಯವಾಗುತ್ತದೆ. ಬೆಳವಣಿಗೆಯ ಸಂದರ್ಭದಲ್ಲಿ ಯಾವುದೇ ಅಡ್ಡಿ ಆತಂಕಗಳಿದ್ದಾಗ ಅವುಗಳನ್ನು ಮೀರುವಂತಹ ದೂರದೃಷ್ಟಿತ್ವದ ದೃಷ್ಟಿಕೋನವಿರಬೇಕು ಎಂದ ಅವರು ಹಿಂದಿನ ಸಾಧನೆಗಳ ಬಗ್ಗೆ ಗುರುತಿಸಿಕೊಂಡು ಬದುಕಲು ಸಾಧ್ಯವಿಲ್ಲ ಆದರೆ ನಮ್ಮ ಮುಂದಿನ ಗುರಿ ಸಾಧನೆಗಳು ಮುಂದಿನ ಭವಿಷ್ಯಕ್ಕೆ ಮುನ್ನುಡಿ ಇಡುವಂತಹುದಾಗಬೇಕು. ಸಾಧಕರು ಪ್ರತಿಕೂಲವಾದ ವಾತಾವರಣದಲ್ಲೂ ಸಾಧನೆಯನ್ನು ಮಾಡುವಂತಾಗಬೇಕು ಮಾತ್ರವಲ್ಲದೆ ನಮಗೆ ಯಾವುದು ಉಪಯುಕ್ತ ಎನಿಸುತ್ತದೆ ಅದರ ಬಗ್ಗೆ ಮಾತ್ರ ಚಿಂತನೆಯನ್ನು ಮಾಡುತ್ತಾ ಮುಂದುವರೆಯಬೇಕಾಗಿದೆ ಎಂದು ಅವರು ಹೇಳಿದರು.

ಮೌಲ್ಯಗಳು ನಾಯಕತ್ವ ಬೆಳೆಯಲು ಸಹಕಾರಿ-ವಂ|ಆಲ್ಫ್ರೆಡ್:
ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಸಂಚಾಲಕರಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಜೀವನವೆಂಬ ಪಯಣದಲ್ಲಿ ವಿದ್ಯಾರ್ಥಿಗಳು ಗುರಿಯನ್ನು ಸಾಧಿಸಬಲ್ಲೆನೆಂಬ ದೃಢವಾದ ಆತ್ಮವಿಶ್ವಾಸ ಹಾಗೂ ಭರವಸೆ ಇದ್ದಾಗ ಗುರಿಯನ್ನು ತಲುಪಲು ಸಾಧ್ಯ. ಜೊತೆಗೆ ಗುರುಹಿರಿಯರ ಮೇಲೆ ಭಕ್ತಿ ಹಾಗೂ ಧನ್ಯತಾಭಾವ ವಿದ್ಯಾರ್ಥಿಗಳ ಅಂತರಂಗದಲ್ಲಿ ಬೇರೂರಬೇಕು. ವಿದ್ಯಾರ್ಥಿಗಳಲ್ಲಿ ಅಡಕವಾದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಸಿಕ್ಕಾಗ ಸಿಕ್ಕಂತಹ ಅವಕಾಶವನ್ನು ಸದ್ವಿನಿಯೋಗಗೊಳಿಸುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಪಡಬೇಕಾಗಿದೆ ಎಂದ ಅವರು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡಾಗ ನಾಯಕತ್ವ ಬೆಳೆಯಲು ಕಾರಣವಾಗಬಲ್ಲುದು ಎಂದು ಅವರು ಹೇಳಿದರು.

ಕ್ರಿಯಾಶೀಲತೆ, ಕುತೂಹಲ, ರಚನಾತ್ಮಕತೆಯಿದ್ದಾಗ ಪ್ರತಿಭೆ ಬೆಳಗಲು ಸಾಧ್ಯ-ವಂ|ಪ್ರಕಾಶ್:
ಗೌರವ ಅತಿಥಿ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಕ್ಯಾಂಪಸ್ ನಿರ್ದೇಶಕರಾಗಿರುವ ವಂ|ಡಾ| ಆಂಟನಿ ಪ್ರಕಾಶ್ ಮೊಂತೆರೋರವರು ಮಾತನಾಡಿ, ಪ್ರತಿಭೆ ಎಲ್ಲರಲ್ಲೂ ಇದೆ. ಪರಸ್ಪರ ಸಂವಹನ ಮಾಡುವ ಸಂದರ್ಭದಲ್ಲಿ ತದೇಕಚಿತ್ತದಿಂದ ಕೇಳುವುದು ಕೂಡ ಒಂದು ರೀತಿಯ ಪ್ರತಿಭೆ ಆಗಿರುತ್ತದೆ. ನಮ್ಮಲ್ಲಿರುವ ಪ್ರತಿಭೆಯು ಬೆಳಗಬೇಕಾದರೆ ಮೊದಲು ಕಲಿಯುವ ಕುತೂಹಲವಿರಬೇಕು. ಕ್ರಿಯಾಶೀಲರೆನಿಸಿಕೊಂಡು ಚುರುಕು ಸ್ವಭಾವದವರಾಗಬೇಕು. ಪ್ರತಿಯೊಂದು ವಿಷಯವು ರಚನಾತ್ಮಕತೆಯಿಂದ ಕೂಡಿರುವಂತಾಗಬೇಕು ಎಂದ ಅವರು ನಾವು ಏನಾಗಿದ್ದೇವೆ, ಏನು ಮಾಡಬೇಕು ಎನ್ನುವ ಅರಿವು ಇದ್ದಾಗ ಜೀವನದಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಅವಕಾಶ, ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ-ಪ್ರೊ.ಲಿಯೋ:
ಗೌರವ ಅತಿಥಿ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹರವರು ಮಾತನಾಡಿ, ಅವಕಾಶ ಮತ್ತು ಸವಾಲುಗಳು ಜೀವನದಲ್ಲಿ ಎದುರಿಸಲು ಬಂದಾಗ ನಿರಾಶಾರಾಗದೆ ಸಾಧಿಸುತ್ತೇನೆ ಎಂಬ ಭರವಸೆಯೊಂದಿಗೆ ಮುಂದಡಿಯಿಡಬೇಕೇ ವಿನಹ ನಿರಾಶೆಯೊಂದಿಗೆ ಹಿಂದಡಿಯಿಡುವುದು ಸರಿಯಲ್ಲ ಎಂದ ಅವರು ಸ್ಪರ್ಧೆಗಳು ಜೀವನಕ್ಕೆ ಸೋಲು-ಗೆಲುವಿನ ಪಾಠ ಕಲಿಸುತ್ತದೆ ಮಾತ್ರವಲ್ಲದೆ ಜೀವನದಲ್ಲಿ ಮುಂದೆ ಬರಲು ಸಹಕಾರಿಯೂ ಆಗುತ್ತದೆ. ಯಾವುದೇ ವಿಷಯದಲ್ಲಿ ವಿದ್ಯಾರ್ಥಿಯೂ ಸೋಲನ್ನು ಅನುಭವಿಸಿದಾಗ ಧೃತಿಗೆಡದೆ ಉತ್ತಮ ಆಲೋಚನೆಯೊಂದಿಗೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಮುಂದೆ ಸಾಗಬೇಕು ಎಂದು ಅವರು ಹೇಳಿದರು.

ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಿಯೋನಾ ಮತ್ತು ಬಳಗ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕ ಪ್ರಶಾಂತ್ ಭಟ್ ವಂದಿಸಿದರು. ಉಪನ್ಯಾಸಕರಾದ ಯಶ್ವಂತ್ ಎಂ.ಡಿ, ದಿವ್ಯ, ವಿದ್ಯಾರ್ಥಿ ಸಂಘದ ನಿರ್ದೇಶಕ ಭರತ್ ಕುಮಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಲನ್ ಪಿಂಟೋ, ಕಾರ್ಯದರ್ಶಿ ಕೃತಿ ಎ.ಟಿರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಉಪನ್ಯಾಸಕಿ ಸತ್ಯಲತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜ್‌ನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೈರಾಜ್ ಭಂಡಾರಿ, ಸದಸ್ಯ ಎ.ಜೆ ರೈ, ಫಿಲೋಮಿನಾ ಕಾಲೇಜ್‌ನ ಪ್ರಾಧ್ಯಾಪಕರಾದ ಪ್ರೊ|ದಿನಕರ್ ರಾವ್, ಡಾ|ವಿಜಯ ಕುಮಾರ್ ಮೊಳೆಯಾರ್, ಪ್ರೊ|ವಿನಯಚಂದ್ರ, ಫಿಲೋಮಿನಾ ಮಹಿಳೆಯರ ಹಾಸ್ಟೆಲ್‌ನ ವಾರ್ಡನ್ ಸಿಸ್ಟರ್ ಫ್ಲೋರಾ ಸಹಿತ ಹಲವರು ಉಪಸ್ಥಿತರಿದ್ದರು.

ಬಾಕ್ಸ್
30 ಪ್ರೌಢಶಾಲೆಗಳಿಂದ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು…
ದಕ್ಷಿಣ ಕನ್ನಡ ಜಿಲ್ಲೆಯ 30 ಪ್ರೌಢಶಾಲೆಗಳ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ರಸಪ್ರಶ್ನೆ, ಕಸದಿಂದ ರಸ, ಪೆನ್ಸಿಲ್ ಸ್ಕೆಚ್, ವಿಚಾರ ಸಂಕಿರಣ, ಆವೆ ಮಣ್ಣಿನಿಂದ ರಚನೆ, ಕಂಪ್ಯೂಟರ್ ಗೇಮಿಂಗ್, ವಿಜ್ಞಾನ ಮಾದರಿ ಪ್ರದರ್ಶನ, ಹೊಸ ಉತ್ನಗಳ ಬಿಡುಗಡೆ, ಜಾನಪದ ನೃತ್ಯ, ತೇಪೆ ಚಿತ್ರಗಾರಿಕೆ(ಕೊಲಾಜ್) ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಕ್ಯಾರಪ್-ಮೊರಾಸ್