ಹಿಂದಿ ದಿವಸ್

ರಾಷ್ಟ್ರ ಭಾಷೆಯಾಗಿರುವ ಹಿಂದಿ ಭಾಷೆಯಲ್ಲಿ ವ್ಯವಹರಿಸಲು ಯಾರೂ ಜಿಜ್ಞಾಸೆಯನ್ನು ಇಟ್ಟುಕೊಳ್ಳಬಾರದು. ದೇಶ-ವಿದೇಶದಲ್ಲಿ ಹೋದಾಗ ಪರಸ್ಪರ ವ್ಯವಹರಿಸಲು ಸಂವಹನ ಮಾಧ್ಯಮವಾಗಿ ಹಿಂದಿ ಭಷೆಯನ್ನು ಕಲಿತುಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ ಎಂದು ಮೊಟ್ಟೆತ್ತಡ್ಕ ಡಿಸಿಆರ್ ಕೇಂದ್ರದ ವಿಜ್ಞಾನಿ ಪ್ರಕಾಶ್ ಎಸ್.ಭಟ್‍ರವರು ಹೇಳಿದರು.

ಅವರು ಸೆ.13 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿಂದಿ ಸಂಘದ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜರಗಿದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಾಷೆ ಯಾವುದೇ ಇರಲಿ, ಭಾಷೆಯ ಮೇಲೆ ಸ್ವಾಭಿಮಾನವಿರಲಿ. ಭಾಷೆಯ ಅಭ್ಯುದಯಕ್ಕೆ ಪ್ರೋತ್ಸಾಹ ನೀಡಿ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿದ್ದರೂ ಮಾನವ ಮಾತ್ರ ಯಾಂತ್ರೀಕೃತನಾಗಿ ಬಿಟ್ಟಿದ್ದಾನೆ. ಮಾನವನ ಹೃದಯ ತಟ್ಟುವ ಭಾಷಾ ಪಾಂಡಿತ್ಯವನ್ನು ಬೆಳೆಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ್, ಸುಭಾಸ್ ಚಂದ್ರ ಬೋಸ್ ಮುಂತಾದ ಹಿರಿಯ ನೇತಾರರು ಬ್ರಿಟಿಷ್‍ರವರೊಂದಿಗೆ ಹಿಂದಿ ಭಾಷೆಯಲ್ಲಿಯೇ ಸಂವಹನ ಮಾಡುತ್ತಿದ್ದರು. ಕನ್ನಡ ಅಥವಾ ಇತರ ಭಾಷೆಗಳ ಪ್ರೇಮದಿಂದ ಹಿಂದಿ ಭಾಷೆಯನ್ನು ಮರೆತು ಬಿಡೋದು ಸೂಕ್ತವಲ್ಲ ಎಂದರು.

ಹಿಂದಿ ಸಂಘದ ನಿರ್ದೇಶಕಿ ಡಾ|ಆಶಾ ಸಾವಿತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ಸಂಘದ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿ ಆರಿನ್ ರಕ್ಷಣ್ ಸ್ವಾಗತಿಸಿ, ವಿದ್ಯಾರ್ಥಿನಿ ದಿಶಾನಾ ಬಾನು ವಂದಿಸಿದರು. ವಿದ್ಯಾರ್ಥಿ ಖಾಲಿದ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ರಿಯಾನ್ನಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
ಶಾಲಾ ಪಠ್ಯಪುಸ್ತಕದಲ್ಲಿ ದ್ವಿತೀಯ ಭಾಷೆಯಾಗಿ ಹಿಂದಿ ಭಾಷೆಯನ್ನು ಸೇರ್ಪಡೆಗೊಳಿಸಿರುವುದಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕಾಗಿದೆ. ಭಾರತ ಸಂವಿಧಾನದಲ್ಲಿ 1950ರಲ್ಲಿ ಅಂತರ್-ರಾಜ್ಯ ಸಂವಹನಗೋಸ್ಕರ ಹಿಂದಿ ಭಾಷೆಯನ್ನು ಸೇರ್ಪಡೆಗೊಳಿಸಿದ್ದಾರೆ. ಫಿಲೋಮಿನಾ ಕಾಲೇಜಿನಲ್ಲಿ ಹಿಂದಿ ಸಂಘದ ಆಶ್ರಯದಲ್ಲಿ ಪ್ರತೀ ವರ್ಷ ಆಚರಣೆ ಮಾಡುವ ಮೂಲಕ ಹಿಂದಿ ಭಾಷೆಗೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿರುವ ಭಾಷಾ ಜ್ಞಾನದ ಪಾಂಡಿತ್ಯವನ್ನು ಪ್ರಚುರಪಡಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಅವಕಾಶಗಳು ಸಿಗುವುದು ಕಡಿಮೆ. ಆದರೆ ದಕ್ಕಿದ ಅವಕಾಶವನ್ನು ವಿದ್ಯಾರ್ಥಿಯು ಧನಾತ್ಮಕವಾಗಿ ಬಳಸಿಕೊಳ್ಳಬೇಕು.