‘ಹದಿಹರೆಯದ ಆರೋಗ್ಯ, ಆಹಾರ ಶೈಲಿ’- ಡಾ|ಚೇತನಾ

ಆಧುನಿಕ ವಿದ್ಯಾಮಾನದಲ್ಲಿ ಬದಲಾದ ಆಹಾರ ಕ್ರಮ ಹಾಗೂ ಜೀವನ ಶೈಲಿ ಮತ್ತು ದೇಹಕ್ಕೆ ನಿಯಮಿತ ವ್ಯಾಯಾಮವಿಲ್ಲದಿದ್ದಲ್ಲಿ ಹದಿಹರೆಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಆಯುರ್ವೇದ ಹಾಗೂ ಯೋಗ ಸಲಹೆಗಾರರಾಗಿರುವ ಡಾ|ಚೇತನಾರವರು ಹೇಳಿದರು.

ಅವರು ಆ.4 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಮಹಿಳಾ ಸಂಘದ ಆಶ್ರಯದಲ್ಲಿ ಕಾಲೇಜ್‌ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ವಿದ್ಯಾರ್ಥಿನಿಯರಿಗೆ ನಡೆಸಿದ ‘ಹದಿಹರೆಯದ ಆರೋಗ್ಯ ಹಾಗೂ ಆಹಾರ ಶೈಲಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡಿದರು. ತಾರುಣ್ಯ ಎಂಬುದು ವಿದ್ಯಾರ್ಥಿನಿಯರಲ್ಲಿ ಉಲ್ಲಾಸವೆನಿಸುವ ಘಳಿಗೆಯಾಗಿದೆ. ಈ ತಾರುಣ್ಯ ಹಂತದಲ್ಲಿ ದೇಹದಲ್ಲಿರುವ ಹಾರ್ಮೋನ್‌ಗಳಿಂದ ವಿದ್ಯಾರ್ಥಿನಿಯರ ಮೇಲೆ ಶಾರೀರಿಕ ಮತ್ತು ಮಾನಸಿಕ ಬದಲಾವಣೆ ನಡೆಯುತ್ತದೆ.

ಸಂಪೂರ್ಣ ಸ್ವಾತಂತ್ರ್ಯವಿಲ್ಲದಂತೆ ಅನಿಸುವುದು, ಆಸೆಗಳು ನೆರವೇರದಾಗ ನಿರಾಶೆಯೆನಿಸುವುದು, ಹೊಸತನಕ್ಕೆ ಆಸೆ ಪಡುವಂತಹುದು, ಏಕಾಂಗಿಯೆನಿಸುವುದು, ಭಾವನಾತ್ಮಕತೆಗೊಳಗಾಗಿ ಸಿಟ್ಟಿಗೊಳಗಾಗುವುದು, ಹಾರ್ಮೋನ್ ವ್ಯತ್ಯಾಸದಿಂದ ಪರಸ್ಪರ ಆಕರ್ಷಣೆಗೊಳಗಾಗುವುದು, ಮನಸ್ಸಿನಲ್ಲಿ ನಕರಾತ್ಮಕ ಅಲೋಚನೆಗಳು ಸುಳಿಯುವುದು ತಾರುಣ್ಯದಲ್ಲಿ ಆಗುವಂತಹ ಬದಲಾವಣೆಗಳಾಗಿವೆ ಎಂದು ಹೇಳಿ ಹದಿಹರೆಯದ ಆರೋಗ್ಯ, ಆಹಾರ ಶೈಲಿ ಬಗ್ಗೆ ಅವರು ವಿದ್ಯಾರ್ಥಿಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಮಾತನಾಡಿ, ವಿದ್ಯಾರ್ಥಿನಿಯರು ಸಭ್ಯತೆ ಹಾಗೂ ಸ್ವಚ್ಚತೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಸಾಮಾಜಿಕ ಜೀವನದಲ್ಲಿ ಹದಿಹರೆಯಕ್ಕೆ ಕಾಲಿಟ್ಟ ಹುಡುಗಿಯರು ಸಭ್ಯತೆಯ ಎಲ್ಲೆ ಮೀರದಿರುವಂತಿರಬೇಕು ಮತ್ತು ಮನೆಯನ್ನು ಸ್ವಚ್ಚವಾಗಿಟ್ಟುಕೊಂಡ ಹಾಗೆಯೇ ತಾನು ಆಭ್ಯಸಿಸುವ ಸಂಸ್ಥೆಯನ್ನು ಸಹ ಸ್ವಚ್ಚತೆವನ್ನಾಗಿಸುವತ್ತ ಗಮನ ಹರಿಸಬೇಕು ಎಂದ ಅವರು ಹದಿಹರೆಯ ಎಂಬುದು ವಿದ್ಯಾರ್ಥಿನಿಯರಿಗೆ ಜೀವನದಲ್ಲಿ ನಿರ್ಣಾಯಕ ಕಾಲಘಟ್ಟವಾಗಿ ಪರಿಣಮಿಸಿದೆ. ಈ ಹಂತದಲ್ಲಿ ವಿದ್ಯಾರ್ಥಿನಿಯರಿಗೆ ಸರಿಯಾದ ಮಾರ್ಗದರ್ಶನ ಲಭಿಸಿದ್ದಲ್ಲಿ ಜೀವನವು ಉಜ್ವಲವೆನಿಸುವುದು ಇಲ್ಲವಾದಲ್ಲಿ ನಶ್ವರವಾಗಲಿದೆ ಎಂದು ಅವರು ಹೇಳಿದರು.

ಮಹಿಳಾ ಸಂಘದ ನಿರ್ದೇಶಕರಾದ ಸತ್ಯಲತಾ ರೈ, ಸವಿತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀದೇವಿ ಮತ್ತು ಬಳಗ ಪ್ರಾರ್ಥಿಸಿದರು. ಪ್ರಿಯಾಂಕ ಮೇರಿ ಸ್ವಾಗತಿಸಿ, ವಿನಿತಾ ವಂದಿಸಿದರು. ಶರಲ್ ಡಿ’ಸೋಜ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಸೃಷ್ಠಿ ಮತ್ತು ಮಹಾಲಸ ಪೈ ಅನಿಸಿಕೆ ವ್ಯಕ್ತಪಡಿಸಿದರು. ಪೃಥ್ವಿ ಕೆ.ಜೆ ಕಾರ್ಯಕ್ರಮ ನಿರೂಪಿಸಿದರು.

ಪ್ರೋಟೀನ್ ಯುಕ್ತ ಆಹಾರ ಸೇವಿಸಿ… -ಡಾ| ಚೇತನಾ, ಆಯುರ್ವೇದ ಹಾಗೂ ಯೋಗ ಸಲಹೆಗಾರರು
ನಿಯಮಿತ ಆಹಾರ, ವ್ಯಾಯಾಮ ಹಾಗೂ ನಿದ್ರೆ ಇವುಗಳು ವ್ಯಕ್ತಿಯ ಜೀವನದ ಮೂರು ಸ್ಥಂಭಗಳಾಗಿವೆ. ಜಂಕ್ ಫುಡ್ ಸೇವಿಸುವುದನ್ನು ಕಡಿಮೆ ಮಾಡಿ ವಿಟಮಿನ್‌ಯುಕ್ತ ಸೊಪ್ಪು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸುವಂತಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಒಂದು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುವಂತಾಗಬೇಕು. ಯೋಗವು ಕೂಡ ಮನುಷ್ಯನ ಆರೋಗ್ಯವಂತನ್ನಾಗಿಸುವಲ್ಲಿ ಪ್ರಮುಖ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗದೆ ವಿದ್ಯಾರ್ಥಿನಿಯರು ಮಾದಕ ವ್ಯಸನಗಳ ದಾಸರಾಗಕೂಡದು.