‘ಶೈಕ್ಷಣಿಕ ಕಾರ್ಯಾಗಾರ, ಪ್ರಾಂಶುಪಾಲರ ಡೈರಿ’ ಬಿಡುಗಡೆ

ಸಮಾಜಕ್ಕೆ ದಾರಿ ತೋರಿಸುವವರು ಶಿಕ್ಷಕರು. ಆದ್ದರಿಂದ ಮಕ್ಕಳು ಜಾರಿ ಬೀಳದ ಹಾಗೆ ಅವರನ್ನು ಸರಿ ದಾರಿಗೆ ಕೊಂಡೊಯ್ದು ಅವರನ್ನು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆಯುವಂತೆ ಶಿಕ್ಷಕರಾಗಲಿ, ಉಪನ್ಯಾಸಕರಾಗಲಿ ಕ್ರಿಯಾಶೀಲತೆಯಿಂದ ಅವರಲ್ಲಿ ವ್ಯಕ್ತಿತ್ವವನ್ನು ರೂಪಿಸುವಂತಾಗಬೇಕು ಎಂದು ರಾಜ್ಯ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಶಕುಂತಳಾ ಟಿ. ಶೆಟ್ಟಿರವರು ಹೇಳಿದರು.

ಅವರು ದ.12 ರಂದು ಕಾಲೇಜ್‌ನ ರಜತ ಮಹೋತ್ಸವದ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಮಂಗಳೂರು ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಜಂಟಿ ಸಹಭಾಗಿತ್ವದಲ್ಲಿ ಫಿಲೋಮಿನಾ ಕಾಲೇಜ್‌ನ ವಜ್ರಮಹೋತ್ಸವದ ಅಂಗವಾಗಿ ಶೈಕ್ಷಣಿಕ ಕಾರ್ಯಗಾರ ಹಾಗೂ ಶೈಕ್ಷಣಿಕ ವಿಷಯಗಳ ಸಚಿತ್ರ ಮಾಹಿತಿಯನ್ನೊಳಗೊಂಡ ‘ಪ್ರಾಂಶುಪಾಲರ ಡೈರಿ-2018’ ಇದರ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಡೈರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಂಶುಪಾಲರ ಸಂಘವು ಉತ್ತಮವಾದ ಕಾರ್ಯವನ್ನು ನಿರ್ವಹಿಸುತ್ತಿದ್ದು ಈ ಸಂಘಟನೆ ಎಲ್ಲಾ ಜಿಲ್ಲೆಗಳಿಗೆ ಒಂದು ಆದರ್ಶ ಮಾದರಿ ಸಂಘಟನೆಯಾಗಿ ಮೂಡಿ ಬಂದಿದೆ. ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನೊಳಗೊಂಡ ಈ ಡೈರಿಯು ಬಹಳ ಉಪಯುಕ್ತವಾಗಿದ್ದು ಆಯಾ ಕಾಲೇಜುಗಳ ಮುಖ್ಯಸ್ಥರ ಕಾಲುಬುಡಕ್ಕೆ ಒದಗಿಸಿಕೊಡುವ ಮೂಲಕ ಒಳ್ಳೆಯ ಯೋಜನೆಯಾಗಿ ಪರಿಣಮಿಸಿದೆ ಎಂದ ಅವರು ಮಕ್ಕಳನ್ನು ಶಿಕ್ಷಕರು ಅಥವಾ ಉಪನ್ಯಾಸಕರು ಸಾಮಾಜಿಕ ಕ್ಷೇತ್ರವಿರಲಿ, ಶೈಕ್ಷಣಿಕ ಕ್ಷೇತ್ರವಿರಲಿ ಅಥವಾ ಇನ್ನಾವುದೇ ಕ್ಷೇತ್ರವಿರಲಿ ಅವರನ್ನು ಉತ್ತಮವಾದ ನಾಯಕರನ್ನಾಗಿ ಬೆಳೆಸುವಂತಾಗಬೇಕು. ಮಕ್ಕಳಲ್ಲಿ ಸಂಸ್ಕಾರಯುತವಾದ ಭಾರತೀಯತೆಯಿಂದ ಕೂಡಿದ ಸಾಮರಸ್ಯ, ಸೌಹಾರ್ದತೆಯನ್ನು ಬೆಳೆಸಿ ಅವರಲ್ಲಿ ಓರ್ವ ಆದರ್ಶ ಪೋಷಕರಾಗಿ, ಮಿತ್ರರಾಗಿ, ಗುರುವಾಗಿ ಗುರುತಿಸಲ್ಪಡುವಂತಾಗಬೇಕು ಎಂದು ಅವರು ಹೇಳಿದರು.

ಯಾರಿಗೂ ಶೋಕಾಸ್ ನೋಟಿಸ್ ನೀಡಿಲ್ಲ-ಕೆ.ಆರ್ ತಿಮ್ಮಯ್ಯ:
ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ. ಆರ್. ತಿಮ್ಮಯ್ಯರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಾಂಶುಪಾಲರ ಸಂಘ ಕರ್ನಾಟಕದಲ್ಲಿ ಎಲ್ಲೂ ಇಲ್ಲ. ಪ್ರಾಂಶುಪಾಲರ ಸಂಘ ಇರುವುದರಿಂದ ನನ್ನ ಕರ್ತವ್ಯ ಶೇ.೭೦ರಷ್ಟು ಕಡಿಮೆಯಾಗಿದೆ ಎನ್ನಬಹುದು. ದಕ್ಷಿಣ ಕನ್ನಡದಿಂದ ನಿರ್ಗಮಿಸುವ ಕಾಲ ಸನ್ನಿಹಿತವಾಗಿದ್ದರೂ ಇತರ ಜಿಲ್ಲೆಗಳಿಗಿಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸಂತೋಷದ ಕ್ಷಣಗಳನ್ನು ಕಳೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ಅವರು ಇಲ್ಲಿ ಉಪ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಉಪನ್ಯಾಸಕರಿಗಾಗಲಿ ಅಥವಾ ಇತರ ಸಿಬ್ಬಂದಿಗಳಿಗಾಗಲಿ ಕರ್ತವ್ಯದ ಬಗ್ಗೆ ಯಾವುದೇ ಶೋಕಾಸ್ ನೋಟಿಸ್ ನೀಡಿಲ್ಲ. ಕೆಲವೊಮ್ಮೆ ಸಿಬ್ಬಂದಿಗಳಿಂದ ಕ್ಲಿಷ್ಟಕರ ಸಮಸ್ಯೆ ಬಂದಾಗ ಹಿರಿಯ ಪ್ರಾಂಶುಪಾಲರೊಡಗೂಡಿ ಅವರ ಸಮಸ್ಯೆ ಕುರಿತು ಪರಿಶೀಲಿಸಿ, ಬಗೆಹರಿಸಿ ಬಿಟ್ಟಿದ್ದೇನೆಯೇ ಹೊರತು ಯಾರಿಗೂ ಶೋಕಾಸ್ ನೋಟಿಸ್ ನೀಡಿಲ್ಲ ಎಂದು ಅವರು ಹೇಳಿದರು.

ಮೊ|ಪತ್ರಾವೋರವರಿಂದ ಶಿಕ್ಷಣದಲ್ಲಿ ಕ್ರಾಂತಿ-ವಂ|ಆಲ್ಫ್ರೆಡ್:
ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜೆ. ಪಿಂಟೋರವರು ಮಾತನಾಡಿ, ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರು ೩೬ ವರ್ಷಗಳ ಕಾಲ ಮಾದೆ ದೇವುಸ್ ಚರ್ಚ್‌ನಲ್ಲಿ ಧರ್ಮಗುರುಗಳಾಗಿದ್ದ ಸಂದರ್ಭದಲ್ಲಿ ಪುತ್ತೂರಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸತಾದ ಕ್ರಾಂತಿ ಆರಂಭಿಸಿದ ಕೀರ್ತಿಗೆ ಪಾತ್ರರಾದರು. ಪತ್ರಾವೋರವರ ದೂರದೃಷ್ಟಿತ್ವದ ಯೋಜನೆಯಿಂದ ೨೬ ಎಕರೆ ಭೂಮಿಯಲ್ಲಿ ಪುತ್ತೂರಿನಲ್ಲಿ ಮೊದಲ ಬಾರಿಗೆ ಶಿಕ್ಷಣ ಸಂಸ್ಥೆಗಳನ್ನು ಅಂದು ತೆರೆಯಲ್ಪಟ್ಟಿತ್ತು. ಅಂದಿನಿಂದ ಇಂದು ಮಾದೆ ದೇವುಸ್ ಚರ್ಚ್ ಹೆಸರಿನಲ್ಲಿ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಮಾದೆ ದೇವುಸ್ ಪ್ರಾಥಮಿಕ ಶಾಲೆ, ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಫಿಲೋಮಿನಾ ಪ್ರೌಢಶಾಲೆ, ಫಿಲೋಮಿನಾ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ಮತ್ತು ಫಿಲೋಮಿನಾ ಪೂರ್ವ ಪ್ರಾಥಮಿಕ ಶಾಲೆಗಳು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿವೆ ಎಂದ ಅವರು ಪ್ರಾಂಶುಪಾಲರು ಸಮಾಜದಲ್ಲಿ ಗೌರವಾನ್ವಿತ ಹುದ್ದೆಯಲ್ಲಿರುವವರು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮತ್ತು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಪ್ರಾಂಶುಪಾರ ಹೆಗಲ ಮೇಲಿದೆ ಎಂದು ಅವರು ಹೇಳಿ ಆಶೀರ್ವಚನ ನೀಡಿದರು.

ಹೊಸತನದ ಅನ್ವೇಷಣೆಯಿಂದ ಜ್ಞಾನದಾಹ ವೃದ್ಧಿ-ವಂ|ಆಂಟನಿ:
ಗೌರವ ಅತಿಥಿ, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ, ಜೀವನವೆಂಬ ಪ್ರಯಾಣದಲ್ಲಿ ಆರಂಭದಿಂದಲೇ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ಬದುಕಿನ ಪಯಣದಲ್ಲಿ ಮಾನವ ಎಷ್ಟೇ ಬಿಝಿ ಇದ್ದರೂ ಹೊಸ ಹೊಸ ವಿಷಯಗಳ ಅನ್ವೇಷಣೆಯತ್ತ ತನ್ನ ಗುರಿ ಸಾಗಬೇಕು. ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿದಾಗ ಹೊಸತನದ ಅನುಭವವಾಗುವುದು ಮಾತ್ರವಲ್ಲದೆ ನಮ್ಮಲ್ಲಿರುವ ಜ್ಞಾನದಾಹಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಾಗಾರಗಳು ಸಂವಹನಕ್ಕೆ ಹೆಚ್ಚಿನ ಪ್ರೌಢತೆಯನ್ನು ತಂದುಕೊಡುತ್ತದೆ-ವಂ|ವಿಜಯ್:
ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ಸ್ವಾಗತಿಸಿ ಮಾತನಾಡಿ, ವಜ್ರಮಹೋತ್ಸವದ ಸಂಭ್ರಮದಲ್ಲಿರುವ ಈ ಸುಸಂದರ್ಭದಲ್ಲಿ ಶೈಕ್ಷಣಿಕ ಕಾರ್ಯಾಗಾರ ಹಾಗೂ ಪ್ರಾಂಶುಪಾಲರ ಡೈರಿ ಬಿಡುಗಡೆ ಕಾರ್ಯಕ್ರಮವು ನಮ್ಮ ಕಾಲೇಜ್‌ನಲ್ಲಿ ಆಯೋಜಿಸಲು ಸಿಕ್ಕಿರುವುದು ಸಂತೋಷದ ವಿಷಯ. ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಸರಿಯಾದ ಮಾರ್ಗದರ್ಶನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಿರುವ ಪ್ರಾಂಶುಪಾಲರ ಡೈರಿಯು ಪ್ರತಿಯೊಂದು ಸಂಸ್ಥೆಯ ಶೈಕ್ಷಣಿಕ ಪ್ರಗತಿಯ ಪಥಕ್ಕೆ ದಾರಿದೀಪವಾಗಿ ಕಂಗೊಳಿಸುತ್ತಿದೆ ಎಂದ ಅವರು ಈ ಡೈರಿಯ ಬಿಡುಗಡೆಯ ಜೊತೆಗೆ ಆಯೋಜಿಸಿರುವ ಶೈಕ್ಷಣಿಕ ಕಾರ್ಯಾಗಾರವು ಹಲವಾರು ರೀತಿಯಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಇಂತಹ ಕಾರ್ಯಾಗಾರಗಳಲ್ಲಿ ನಿರಂತರ ಪಾಲ್ಗೊಳ್ಳುವಿಕೆಯು ಶಿಕ್ಷಕರ ಜ್ಞಾನವನ್ನು ವೃದ್ಧಿಸುವುದು ಅಲ್ಲದೆ ತರಗತಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸುವ ಸಂವಹನಕ್ಕೆ ಹೆಚ್ಚಿನ ಪ್ರೌಢತೆಯನ್ನು ತಂದುಕೊಡುತ್ತದೆ ಎಂದು ಅವರು ಹೇಳಿದರು.

ಬಹಳ ಹಿಂದಿನಿಂದಲೂ ಆಸ್ತಿತ್ವದಲ್ಲಿರುವ ಸಂಸ್ಥೆ-ಎಲ್ವೀರ ಫಿಲೋಮಿನಾ:
ಪ್ರಾಸ್ತಾವಿಕವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿರುವ ಎಲ್ವೀರ ಫಿಲೋಮಿನಾರವರು, ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ಈ ಸಂಸ್ಥೆಯು ಪ್ರತೀ ಶೈಕ್ಷಣಿಕ ವರ್ಷದಲ್ಲಿ ಪದವಿ ಪೂರ್ವ ವ್ಯಾಸಂಗದ ಅವಧಿಯಲ್ಲಿ ಪೂರ್ವ ತಯಾರಿಯೊಂದಿಗೆ ಅನೇಕ ಚಟುವಟಿಕೆಗಳನ್ನು ನಡೆಸಬೇಕಾಗಿರುತ್ತದೆ. ಪ್ರತೀ ಹಂತದ ಪರೀಕ್ಷೆಗಳು, ಇಲಾಖಾ ನಿಯಾಮಾವಳಿಗಳಂತೆ ನಡೆಸಬೇಕಾದ ಕಾರ್ಯಕ್ರಮಗಳು, ತಾಲೂಕು, ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು ಇತ್ಯಾದಿಗಳೆಲ್ಲವನ್ನೂ ಕ್ರಮ ಪ್ರಕಾರವಾಗಿ ಆಯೋಜಿಸಿ ಯಶಸ್ವಿಯಾಗಿ ನೆರವೇರುವಂತೆ ಮಾಡುವುದು ಈ ಸಂಘದ ಉದ್ಧೇಶವಾಗಿರುತ್ತದೆ ಎಂದ ಅವರು ಇದರೊಂದಿಗೆ ಸಂಘದ ವತಿಯಿಂದ ಎಲ್ಲಾ ಪ್ರಾಂಶುಪಾಲರಿಗೆ ಆಡಳಿತಾತ್ಮಕ ದೃಷ್ಟಿಯಿಂದ ಉಪಯೋಗವಾಗುವಂತೆ ಶೈಕ್ಷಣಿಕ ಕಾರ್ಯಾಗಾರಗಳನ್ನು ನಿರ್ವಹಿಸುತ್ತಾ ಬಂದಿದ್ದು ನುರಿತ ಹಾಗೂ ವಿಶೇಷ ತರಬೇತಿಯುಳ್ಳ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ತರಬೇತಿಯನ್ನೂ ಈ ಸಂಘವು ನೀಡುತ್ತದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ಎನ್.ದುಗ್ಗಪ್ಪ, ಕೋಶಾಧಿಕಾರಿ ತುಂಬೆ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ಕೆ.ಗಂಗಾಧರ್ ಆಳ್ವ, ಮಂಗಳೂರು ಕುದ್ರೋಳಿಯ ಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ವಸಂತ ಕುಮಾರ್, ಉಳ್ಳಾಲ ಅಝರತ್ ಸೈಯದ್ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲೆ ಡಾ|ಸಂಗೀತ ಎನ್.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಸುಮನಾ ಪ್ರಶಾಂತ್ ಪ್ರಾರ್ಥಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಡಾ|ಕಿಶೋರ್ ಕುಮಾರ್ ಶೇಣಿ ವಂದಿಸಿದರು. ಉಪನ್ಯಾಸಕ ಪ್ರಶಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರವು ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 12:30 ವರೆಗೆ ಪೂರ್ವಾಹ್ನದ ಅವಧಿಯ ಕಾರ್ಯಗಾರ ನಡೆದು ಮಧ್ಯಾಹ್ನದ ಭೋಜನದ ನಂತರ ೧:೩೦ರಿಂದ ೩:೩೦ರವರೆಗೆ ಅಪರಾಹ್ನದ ಅವಧಿಯ ಕಾರ್ಯಗಾರ ಜರಗಿತು.

ವ್ಯಕ್ತಿಗೆ ಪ್ರವೃತ್ತಿಯೇ ಬಹಳ ಮುಖ್ಯ…
ಮಕ್ಕಳನ್ನು ಪ್ರೀತಿಸಬೇಕು ಎಂಬುದು ನಿಜವಾದ ಶಿಕ್ಷಣ ಆಗಬಲ್ಲುದು. ಹೊಸತನವನ್ನು ಯೋಚಿಸಬೇಕು, ಆಗ ವೃತ್ತಿಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುವುದು. ಪ್ರಾಂಶುಪಾಲರಾದವರು ತನ್ನ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಸ್ಥಾನದಲ್ಲಿ ನಿಂತು ಯೋಚಿಸಿದಾಗ ಕೆಲಸ-ಕಾರ್ಯಗಳು ಯಶಸ್ವಿಯಾಗಿ ಸಾಗುವುದಕ್ಕೆ ಸಾಧ್ಯಗುತ್ತದೆ. ಗೊತ್ತಿಲ್ಲ ಅಂತ ಗೊತ್ತಿಲ್ಲದವ ಮೂರ್ಖ, ಅವನನ್ನು ಹಿಂಬಾಲಿಸಬೇಡಿ. ಗೊತ್ತಿಲ್ಲ ಅಂತ ಗೊತ್ತಿದ್ದವ ಪ್ರಾಮಾಣಿಕ, ಅವರಿಗೆ ತರಬೇತಿ ಕೊಡುವಂತಾಗಬೇಕು. ಗೊತ್ತಿದೆ ಅಂತ ಗೊತ್ತಿದ್ದವ ಬುದ್ಧಿವಂತ, ಅವರನ್ನು ಹಿಂಬಾಲಿಸುವಂತಾಗಬೇಕು. ಜ್ಞಾನ ಹಾಗೂ ಕೌಶಲ್ಯ ಜೀವನದ ಶೇ.25 ಭಾಗವಾಗಿದ್ದು ಪ್ರವೃತ್ತಿ ಎಂಬುದು ಶೇ.75ಭಾಗ ಆಗಿದೆ. ಪ್ರವೃತ್ತಿಯೇ ಜೀವನದ ಬಹು ಮುಖ್ಯ ಅಂಗವಾಗಿದೆ. ಪ್ರವೃತ್ತಿಯಲ್ಲಿ ವ್ಯಕ್ತಿ ತಪ್ಪಿದರೆ ಜ್ಞಾನ ಹಾಗೂ ಕೌಶಲ್ಯ ಇದ್ದೂ ಏನೂ ಪ್ರಯೋಜನವಿಲ್ಲ. ಹುಟ್ಟಿನಿಂದಲೇ ಯಾರೂ ನಾಯಕನಾಗುವುದಿಲ್ಲ. ಸವಾಲುಗಳನ್ನು ಜವಾಬ್ದಾರಿ ಅರಿತು ಕಾಳಜಿಯಿಂದ ಎದುರಿಸುವವನು ಉತ್ತಮ ನಾಯಕನಾಗಬಲ್ಲ.
-ಡಾ|ಗುರುರಾಜ ಕರ್ಜಗಿ, ಸಂಪನ್ಮೂಲ ವ್ಯಕ್ತಿ, ಸ್ಥಾಪಕಾಧ್ಯಕ್ಷರು, ಅಂತರಾಷ್ಟ್ರೀಯ ಸೃಜನ ಶೀಲ ಕಲಿಕಾ ತರಬೇತಿ ಕೇಂದ್ರ, ಬೆಂಗಳೂರು.

ಸಮಗ್ರ ಮಾಹಿತಿ ‘ಡೈರಿ..’
ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಮಗ್ರ ಮಾಹಿತಿಯನ್ನೊಳಗೊಂಡ ಈ ಡೈರಿಯಲ್ಲಿ ಎಲ್ಲಾ ಕಾಲೇಜುಗಳ ದೂರವಾಣಿ ಸಂಖ್ಯೆ, ಶೈಕ್ಷಣಿಕ ವೇಳಾಪಟ್ಟಿ, ಪ್ರಾಂಶುಪಾಲರುಗಳ ಹೆಸರು ಮತ್ತು ವಿಳಾಸ, ರಜಾದಿನಗಳ ವಿವರ, ಅರ್ಜಿ ನಮೂನೆಗಳು ಒಳಗೊಂಡಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ 202 ಖಾಸಗಿ, ಅನುದಾನಿತ, ಸರಕಾರಿ ಕಾಲೇಜುಗಳ ಪೈಕಿ 152 ಕಾಲೇಜುಗಳ ಪ್ರಾಂಶುಪಾಲರುಗಳು ಈ ಶೈಕ್ಷಣಿಕ ಕಾರ್ಯಾಗಾರ ಹಾಗೂ ಪ್ರಾಂಶುಪಾಲರ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.