ಫಿಲೋಮಿನಾದಲ್ಲಿ `ಸ್ವಚ್ಚತೆ ಇ ಸೇವಾ’ ಜಾಗೃತಿ ಕಾರ್ಯಕ್ರಮ

ಆರೋಗ್ಯಯುಕ್ತ ಸ್ವಚ್ಚತೆಯತ್ತ ಗಮನ ಕೇಂದ್ರೀಕೃತವಾಗಿಲ್ಲದಿದ್ದರೆ ಪರಿಸರ ಹಾಗೂ ಮಾನವನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಮಾನವ ಇಂದು ಕೇವಲ ಸಂಪತ್ತು ಕ್ರೋಢೀಕರಣದತ್ತವೇ ಮನಸ್ಸು ಮಾಡಿದ್ದರಿಂದ ಮಾನವೀಯ ಮೌಲ್ಯಗಳು ಮರೀಚಿಕೆಯಾಗುತ್ತಿವೆ ಎಂದು ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ|ಗಣಪತಿ ಎಸ್.ರವರು ಹೇಳಿದರು.

ಅವರು ಅ.31 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ನಡೆದ `ಸ್ವಚ್ಚತೆ ಇ ಸೇವಾ’ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರದಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸರವನ್ನು ಜಾಗತಿಕ ತಾಪಮಾನ ಏರಿಕೆಯತ್ತ ಕೊಂಡೊಯ್ಯಲು ಸಹಕಾರಿಯಾಗಿದ್ದಾನೆ. ಪ್ರಕೃತಿ ಎಂಬುದು ದೇವರು. ಆದರೆ ಅದೇ ಪ್ರಕೃತಿಯ ವಿನಾಶ ಮಾಡಿದಾಗ ಪ್ರಕೃತಿಯು ಯಾವ ರೀತಿ ತಿರುಗಿ ಬೀಳುತ್ತದೆ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ನಾವು ಕಣ್ಣಾರೆ ಕಂಡಿದ್ದೇವೆ. ಪರಿಸರ ಸಂರಕ್ಷಣೆ ನಮ್ಮ ಗುರುತರ ಜವಾಬ್ದಾರಿಯಾದಾಗ ಮಾತ್ರ ಭೂಮಿಯನ್ನು ಸಮತೋಲನದಲ್ಲಿ ಕಾಯ್ದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು ಪ್ರಜ್ಞಾವಂತ ನಾಗರಿಕರು ಪರಿಸರವನ್ನು ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. 2014ರಲ್ಲಿ ಸ್ವಚ್ಚ ಭಾರತ್ ಮಿಶನ್ ಅಥವಾ ಅಭಿಯಾನದ ಮೂಲಕ ಕೆಲವು ಸಂಘಟನೆಗಳು ಪರಿಸರದ ಸ್ವಚ್ಚತೆಯನ್ನು ಗಮನದಲ್ಲಿರಿಸಿಕೊಂಡು ಈಗಾಗಲೇ ಕಾರ್ಯೋನ್ಮುವಾಗಿವೆ. ವಿದ್ಯಾರ್ಥಿಗಳು ಕೂಡ ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಸಂಘಟನೆಗಳ ಮೂಲಕ ಕೈಜೋಡಿಸುವತ್ತ ಕಂಕಣಬದಧರಾಗಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಮಾತನಾಡಿ, ನಮ್ಮ ಈ ಮಾತೃಭೂಮಿಯನ್ನು ಸಂರಕ್ಷಿಸುವ ಜವಾಬ್ದಾರಿ ಪ್ರಜ್ಞಾವಂತ ನಾಗರಿಕನ ಆದ್ಯ ಕರ್ತವ್ಯವಾಗಿದ್ದರೂ, ಪ್ರಸ್ತುತ ದಿನಗಳಲ್ಲಿ ಮಾನವ ಸ್ವಾರ್ಥದಿಂದ ಪರಿಸರವನ್ನು ಸಂರಕ್ಷಿಸುವಲ್ಲಿ ಸಂಪೂರ್ಣ ವಿಫಲನಾಗಿದ್ದಾನೆ. ನಮ್ಮ ಪರಿಸರದ ಸುತ್ತಮುತ್ತಲಿನ ಪರಿಸರವನ್ನು ಮೊದಲು ಸ್ವಚ್ಚವಾಗಿಟ್ಟುಕೊಳ್ಳುವ ಪ್ರಾಥಮಿಕ ಸೇವೆ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಶನ್ ಸಂಸ್ಥೆಯು ಕಳೆದ ಎರಡ್ಮೂರು ವರ್ಷಗಳಿಂದ ಸ್ವಚ್ಚತೆಯ ಬಗ್ಗೆ ಯಶಸ್ವಿ ಅಭಿಯಾನವನ್ನು ಆರಂಭಿಸಿರುವುದು ಶ್ಲಾಘನೀಯವಾಗಿದೆ. ಮೊದಲು ನಮ್ಮ ಮನಸ್ಸು ಹಾಗೂ ಹೃದಯದಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿದಾಗ ಎಲ್ಲವೂ ಸ್ವಚ್ಚ ಎನಿಸುವುದು ಎಂದರು.

ಮಾನವಿಕ ಸಂಘದ ನಿರ್ದೇಶಕರಾದ ವಿಜಯ್ ಮ್ಯಾಕ್ಸಿಂ ಡಿ’ಸೋಜ, ಗೀತಾ ಕುಮಾರಿ, ಹಾಗೂ ಉಪನ್ಯಾಸಕರಾದ ಶರತ್ ಆಳ್ವ ಚನಿಲ, ಸತೀಶ್‌ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅರ್ಥಶಾಸ್ತ ವಿಭಾಗವು ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿ ನೆವಿಲ್ ಪಿಂಟೋ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಓದಿದರು. ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸತ್ಯಾತ್ಮ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸನಲ್ ಆ್ಯಂಟನಿ ವಂದಿಸಿದರು.

ವಿದ್ಯಾರ್ಥಿಗಳು ಸ್ವಚ್ಚತೆಯ ರಾಯಭಾರಿಗಳಾಗಲಿ…

ಪ್ಲಾಸ್ಟಿಕ್ ಎನ್ನುವುದು ನಂ.ವನ್ ಶತ್ರು. ಪ್ಲಾಸ್ಟಿಕ್ ಎಂಬ ವಸ್ತುವು ಎಷ್ಟೇ ವರ್ಷಗಳಾದರೂ ಮಣ್ಣಿನಲ್ಲಿ ಕರಗದೇ ಇರುವುದರಿಂದ ಅದು ಪರಿಸರದ ಮೇಲೆ ವ್ಯತರಿಕ್ತ ಪರಿಣಾಮ ಬೀರಿದಾಗ ಮಾನವನ ಆರೋಗ್ಯವು ಕುಂಠಿತವಾಗುತ್ತದೆ. ಬಯಲು ಶೌಚದ ಬದಲು ಶೌಚಾಲಯದ ನಿರ್ಮಾಣ, ಉತ್ತಮ ನೀರಿನ ಪೂರೈಕೆಯತ್ತ ಗಮನ, ವಿಷಯುಕ್ತ ಗಾಳಿಯಿಂದ ತಡೆ ಇವುಗಳನ್ನು ಮಾನವ ಅನುಸರಿಸಿದಾಗ ಪ್ರಕೃತಿಯು ಹಸನಾಗುವುದು ಮಾತ್ರವಲ್ಲದೆ ಮಾನವನ ಆರೋಗ್ಯವೂ ಉತ್ತಮಗೊಳ್ಳುವುದು. ಭಾರತ ದೇಶವನ್ನು ಸ್ವಚ್ಚತೆಯಾಗಿ ಇಟ್ಟುಕೊಂಡಾಗ ವಿದೇಶಿಗರು ಭಾರತ ಪ್ರವಾಸ ಕೈಗೊಂಡಾಗ ಭಾರತಕ್ಕೆ ವಿಶೇಷ ಗೌರವ ಪ್ರಾಪ್ತಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸ್ವಚ್ಚತೆಯ ರಾಯಭಾರಿಗಳಾಗಬೇಕು. – ಪ್ರೊ|ಗಣಪತಿ ಎಸ್, ವಿಶ್ರಾಂತ ಪ್ರಾಧ್ಯಾಪಕರು, ಸಂತ ಫಿಲೋಮಿನಾ ಕಾಲೇಜು

ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕರಾಗಿ ಕಳೆದ ಜುಲೈ ತಿಂಗಳಲ್ಲಿ ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದ ಕಾರ್ಯಕ್ರಮದ ಮುಖ್ಯ ಅತಿಥಿ ಪ್ರೊ|ಗಣಪತಿ ಎಸ್.ರವರನ್ನು ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿ ಡಿಕ್ಸನ್‌ರವರು ಸನ್ಮಾನಿತ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.