ಬಾಲವನ ಈಜುಕೊಳದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ವಿದ್ಯಾರ್ಥಿಗಳಿಗೆ ಈಜಿನಲ್ಲಿ ಪ್ರತಿಭೆ ತೋರಿಸಲು ಶಿಕ್ಷಣ ಇಲಾಖೆಯು ಈಜು ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಈಜು ಎಂಬುದು ಶರೀರಕ್ಕೆ ಮತ್ತು ಮನಸ್ಸಿಗೆ ಆರೋಗ್ಯಕರವಾದ ವ್ಯಾಯಾಮ ಒದಗಿಸುತ್ತದೆ. ನಮ್ಮ ದೇಹದ ಪ್ರತಿಯೊಂದು ಅಂಗಗಳನ್ನು ಅದು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತದೆ ಎಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಹೇಳಿದರು
.
ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಪರ್ಲಡ್ಕ ಡಾ|ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಸೆ.12 ರಂದು ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆ-2019 ಅನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಯಾರೂ ಕೂಡ ನೀರು ಮತ್ತು ಬೆಂಕಿಯೊಂದಿಗೆ ಸರಸವಾಡಲು ಹೋಗಬೇಡಿ. ನೀರಿನ ಆಳ ಎಷ್ಟರಮಟ್ಟಿಗಿದೆ ಎಂಬುದನ್ನು ಅರಿಯದೆ ನೀರಿನಲ್ಲಿ ಚೆಲ್ಲಾಟವಾಡಲು ಹೋದರೆ ನೀರು ಪಾಲಾಗುತ್ತೀರಿ. ಮಾನವ ಎಷ್ಟು ಮುಂದುವರಿದಿದ್ದಾನೆ ಅಂದರೆ ಸಮುದ್ರದ ಅಲೆಗಳೊಂದಿಗೆ ಈಜಾಡುವ ಸಾಮಥ್ರ್ಯವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ ಗೌಡರಂಥವರು ಕಂಡುಕೊಂಡಿದ್ದಾರೆ ಎಂದ ಅವರು ಹಿಂದೆ ಸಾಧುಸಂತರು ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ರೂಪಿಸಿಕೊಂಡು ಯಶಸ್ವಿಯಾದಂತೆ ನಾವೂ ಕೂಡ ನಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಯಶಸ್ಸಿನ ಹೆಜ್ಜೆಯೊಂದಿಗೆ ಸಾಗೋಣ ಮಾತ್ರವಲ್ಲದೆ ನಮ್ಮಲ್ಲಿ ಪರಸ್ಪರ ಸಹೋದರತ್ವ, ವಿವಿಧತೆಯಲ್ಲಿ ಏಕತೆ ಕಾಣುವುದು, ಜಾತಿ-ಧರ್ಮವನ್ನು ಪ್ರೀತಿಸುವ ಗುಣವನ್ನು ಬೆಳೆಸುವಂತಾಗಲಿ ಎಂದು ಅವರು ಹೇಳಿದರು.

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಎವರೆಸ್ಟ್ ರೊಡ್ರಿಗಸ್‍ರವರು ಮಾತನಾಡಿ, ತಾಯಿ ಗರ್ಭದಲ್ಲಿ ಮಗು 9 ತಿಂಗಳು ಇದ್ದು ಬಳಿಕ ಹೊರ ಬಂದ ಮೇಲೆ ಮಗು ಈಜಾಡಲು ಕಲಿಯುತ್ತದೆ. ಆದರೆ ಪ್ರಾಣಿಗಳು ಇದಕ್ಕೆ ತದ್ವಿರುದ್ಧ. ಏಕೆಂದರೆ ಪ್ರಾಣಿಗಳಿಗೆ ಈಜಾಡಲು ಯಾರೂ ಕಲಿಸಬೇಕೆಂದಿಲ್ಲ. ಈಜು ಎಂಬುದು ಜೀವರಕ್ಷಕ ಕಲೆಯಾಗಿದೆ. ಅಪಾಯದ ಸಂದರ್ಭದಲ್ಲಿ ಈಜು ಕಲಿತವರಿಗೆ ಅಪಾಯದಿಂದ ಪಾರಾಗಲು ಉತ್ತಮ ದಾರಿಯಾಗುತ್ತದೆ. ನೀರಿನಲ್ಲಿ ವ್ಯಾಯಾಮ ಮಾಡಿದಾಗ ದೇಹಕ್ಕೆ ಯಾವುದೇ ಹಾನಿಯಾಗದು ಬದಲಾಗಿ ದೇಹವನ್ನು ಮತ್ತೂ ಹುರಿಗೊಳಿಸುತ್ತದೆ ಎಂದರು.

ಪುತ್ತೂರು ಆಕ್ವೆಟಿಕ್ ಕ್ಲಬ್ ಸದಸ್ಯೆ ಪ್ರತಿಮಾ ಹೆಗ್ಡೆ ಮಾತನಾಡಿ, ಬಾಲವನ ಈಜುಕೊಳ ನನಗೆ ಎರಡನೇ ಮನೆ ಇದ್ದಾಗೆ. ಯಾಕೆಂದರೆ ನನ್ನ ಮಗ ವೈಷ್ಣವ್ ಇದೇ ಈಜುಕೊಳದಲ್ಲಿ ಅಭ್ಯಾಸ ಮಾಡಿ ತನ್ನ ಪ್ರತಿಭೆಯನ್ನು ತೋರ್ಪಡಿಸುವಲ್ಲಿ ಒಂದು ವೇದಿಕೆಯಾಗಿತ್ತು. ವಿದ್ಯಾರ್ಥಿಗಳು ಜೀವರಕ್ಷಕ ಕಲೆಯಾಗಿರುವ ಈಜಿನ ಬಗ್ಗೆ ಹೆಚ್ಚಿನ ಒಲವು ತೋರಿ ಮಾತ್ರವಲ್ಲದೆ ಈಜಿನ ಬಗ್ಗೆ ಉತ್ತಮ ಪ್ರಚಾರವನ್ನೂ ಕೂಡ ಮಾಡುವಂತಾಗಲಿ ಎಂದರು.

ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಸ್ವಾಗತಿಸಿ, ಆಂಗ್ಲ ವಿಭಾಗದ ಉಪನ್ಯಾಸಕಿ ಸತ್ಯಲತಾ ರೈ ವಂದಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಡಾ|ಆಶಾ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್
10 ಕಾಲೇಜು…40 ಮಂದಿ ಈಜುಪಟುಗಳು…
ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂವ ಕಾಲೇಜುಗಳಾದ ಆಳ್ವಾಸ್ ಮೂಡಬಿದ್ರೆ, ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಶಾರದಾ ವಿದ್ಯಾನಿಕೇತನ ಕಾಲೇಜು, ಅಂಬಿಕಾ ಕಾಲೇಜು ಪುತ್ತೂರು, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಉಜಿರೆ ಎಸ್‍ಡಿಎಂ ಕಾಲೇಜು, ಮಂಗಳೂರು ಯೇನಪೋಯ ಕಾಲೇಜು, ಮಂಗಳೂರು ಬೋಸ್ಕೋಸ್ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜು ಹೀಗೆ ಒಟ್ಟು 10 ಪದವಿ ಪೂರ್ವ ಕಾಲೇಜುಗಳ 29 ಮಂದಿ ಬಾಲಕರು, 11 ಮಂದಿ ಬಾಲಕಿ ಈಜುಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.