ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್ ಸ್ಪರ್ಧೆ

ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿ ಭವಿತ್ ಕುಮಾರ್‌ರವರು ಡಿಸೆಂಬರ್ ತಿಂಗಳಿನಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ಹರಿಯಾಣದ ರೋಹ್ಟಕ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜ್‌ನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ ಕೂಟದ ಪೋಲ್‌ವಾಲ್ಟ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ 3.20ಮೀ ಎತ್ತರಕ್ಕೆ ಜಿಗಿಯುವುದರೊಂದಿಗೆ ಬೆಳ್ಳಿ ಪದಕವನ್ನು ತನ್ನ ಕೊರಳಿಗೇರಿಸಿದ ಭವಿತ್ ಕುಮಾರ್‌ರವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.

ಮೂಡಬಿದಿರೆಯಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಭವಿತ್‌ರವರು 3.20ಮೀ ಜಿಗಿಯುವುದರೊಂದಿಗೆ ಬೆಳ್ಳಿ ಪದಕವನ್ನು ಪಡೆದಿದ್ದರು. ಅದರಂತೆ ಪುತ್ತೂರಿನ ಫಿಲೋಮಿನಾ ಕಾಲೇಜ್‌ನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭವಿತ್‌ರವರು 3.10ಮೀ ಎತ್ತರ ಜಿಗಿಯುವುದರೊಂದಿಗೆ ಚಿನ್ನದ ಪದಕವನ್ನು ಗಳಿಸಿದ್ದರು. ಇವರಿಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್‌ನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರರವರು ತರಬೇತಿ ನೀಡಿರುತ್ತಾರೆ. ಭವಿತ್‌ರವರು ಶಾಂತಿಗೋಡು ಮರಕ್ಕೂರು ನಿವಾಸಿ ಎಂ.ಶ್ರೀಧರ ಪೂಜಾರಿ ಹಾಗೂ ಎಂ.ವನಜಾಕ್ಷಿ ದಂಪತಿ ಪುತ್ರ. ಪ್ರಶಾಂತ್‌ರವರ ಸಾಧನೆಗೆ ಕಾಲೇಜ್‌ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಹಾಗೂ ಕಾಲೇಜ್‌ನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ ಹಾಗೂ ಸೌಮ್ಯಲತಾರವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.