ಸೋಲು-ಗೆಲುವನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿ ಮುನ್ನೆಡೆ-ಡಾ.ದೀಪಕ್ ರೈ

ಕ್ರೀಡೆಯಲ್ಲಿ ಸೋಲು-ಗೆಲುವು ಇರುವಂತದ್ದೇ. ಸೋಲು-ಗೆಲುವನ್ನು ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿದಾಗ ಕ್ರೀಡೆಗೆ ನೈಜವಾದ ಅರ್ಥ ಬರುತ್ತದೆ. ಕ್ರೀಡೆಯನ್ನು ಸತತ ಪರಿಶ್ರಮಪಟ್ಟು ಅಭ್ಯಸಿಸಿದಾಗ ಅದು ಜೀವನಕ್ಕೆ ದಾರಿಯಾಗಬಲ್ಲುದು. ಆದ್ದರಿಂದ ಕ್ರೀಡೆಯನ್ನು ಹಣ ಗಳಿಸುವ ವೃತ್ತಿಪರ ಕ್ರೀಡೆಯಾಗಿದೆ ಎಂದು ಪುತ್ತೂರು ಸಿಟಿ ಆಸ್ಪತ್ರೆಯ ಯೂರಲಾಜಿಸ್ಟ್ ಆಗಿರುವ ಡಾ.ದೀಪಕ್ ರೈಯವರು ಹೇಳಿದರು.

ಅವರು ನ.12 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜ್‍ನ ಕ್ರೀಡಾಂಗಣದಲ್ಲಿ ನಡೆದ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾರ್ಷಿಕ ಕ್ರೀಡಾಕೂಟದಲ್ಲಿ ಬಲೂನ್‍ನ ಗೊಂಚಲನ್ನು ಆಕಾಶಕ್ಕೆ ತೇಲಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಹಿಂದಿನಿಂದಲೂ ಈ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆ ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ಹುಟ್ಟುಹಾಕಿದೆ ಮಾತ್ರವಲ್ಲ ರಾಷ್ಟ್ರ-ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿ ಜಿಲ್ಲೆಯಲ್ಲೇ ಅಗ್ರಸ್ಥಾನವನ್ನು ಗಳಿಸಿದೆ ಎಂದರೆ ತಪ್ಪಲ್ಲ. ಕ್ರೀಡೆಯಲ್ಲಿ ಯಶಸ್ಸು ಒಲಿಯಬೇಕಾದರೆ ಅದು ನಿರಂತರ ಆಭ್ಯಾಸದಿಂದ ಮಾತ್ರ ಸಾಧ್ಯ. ಕ್ರೀಡೆ ಎನ್ನುವುದು ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಅತ್ತ್ಯುತ್ತಮ ವೇದಿಕೆಯಾಗಿದೆ ಎಂದ ಅವರು ಹಿಂದಿನ ಕಾಲದಲ್ಲಿ ಕ್ರೀಡೆ ಎನ್ನುವುದು ಉದ್ಯೋಗಕ್ಕಾಗಿ ಎಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಕ್ರೀಡೆಯು ಪ್ರತಿಭಾವಂತ ಕ್ರೀಡಾಪಟುಗಳಿಗೆ ಅಧಿಕ ಹಣ ಗಳಿಸುವ ಉತ್ತಮ ಅವಕಾಶಗಳಲ್ಲೊಂದಾಗಿದೆ. ಕ್ರೀಡಾಪಟುಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಾಗ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಕ್ರೀಡಾ ಪಾರಮ್ಯವನ್ನು ಮೆರೆಯುಂತಾಗಲಿ ಎಂದು ಅವರು ಹೇಳಿದರು.

ರಾಷ್ಟ್ರ/ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಛಾಪನ್ನೊತ್ತಿದ ಸಂಸ್ಥೆ ಫಿಲೋಮಿನಾ-ನವನೀತ್:
ಮುಖ್ಯ ಅತಿಥಿ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಉಪಾಧ್ಯಕ್ಷ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ನವನೀತ್ ಬಜಾಜ್‍ರವರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಹತ್ತು ವರುಷದ ಹಿಂದೆ ನಾನೂ ಕೂಡ ಓರ್ವ ವಿದ್ಯಾರ್ಥಿ ಕ್ರೀಡಾಪಟುವಾಗಿ ಇದೇ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಭಾಗವಹಿಸಿದ್ದ ನೆನಪು ಮತ್ತೇ ಮರುಕಳಿಸುತ್ತಿದೆ. ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಅಂದಿನ ಮೇಜರ್ ವೆಂಕಟ್ರಾಮಯ್ಯರವರ ಗರಡಿಯಲ್ಲಿ ಅದೆಷ್ಟೋ ವಿದ್ಯಾರ್ಥಿ ಕ್ರೀಡಾಪಟುಗಳು ರಾಷ್ಟ್ರ/ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಛಾಪನ್ನು ಒತ್ತಿದ್ದಾರೆ ಎಂದ ಅವರು ಗ್ರಾಮೀಣ ಪ್ರದೇಶದಿಂದ ಬಂದು ಕಬಡ್ಡಿಯಲ್ಲಿ ಅಸಾಮಾನ್ಯ ಸಾಧನೆ ಗಳಿಸಿ, ಪ್ರಸ್ತುತ ಪ್ರೊ ಕಬಡ್ಡಿಯಲ್ಲಿ ಸುಮಾರು ರೂ.80 ಲಕ್ಷ ಹಣಕ್ಕೆ ಬಿಕರಿಯಾಗುವ ಮೂಲಕ ಹೆಸರುವಾಸಿಯಾದ ಪ್ರಶಾಂತ್ ರೈಯವರೂ ಕೂಡ ಇದೇ ವಿದ್ಯಾಸಂಸ್ಥೆಯಲ್ಲಿ ಕಲಿತವರಾಗಿದ್ದಾರೆ. ಕಳೆದ 60 ವರ್ಷಗಳಲ್ಲಿ ಇದೇ ಮೊದಲು ಬಾಡಿ ಬಿಲ್ಡಿಂಗ್‍ನಲ್ಲಿ ಫಿಲೋಮಿನಾ ಸಂಸ್ಥೆ ವಿಜಯಿಯಾಗಿದೆ ಮಾತ್ರವಲ್ಲದೆ ಕಬಡ್ಡಿ ಹಾಗೂ ವೈಟ್‍ಲಿಪ್ಟಿಂಗ್‍ನಲ್ಲೂ ಮುಂದಿನ ದಿನಗಳಲ್ಲಿ ಈ ಸಂಸ್ಥೆ ಪ್ರಜ್ವಲಿಸಲಿ ಎಂದು ಅವರು ಹೇಳಿದರು.

ಕ್ರೀಡೆಯಲ್ಲಿ ಪ್ರಾಮಾಣಿಕತೆ, ಶಿಸ್ತನ್ನು ಮೈಗೂಡಿಸಿಕೊಂಡಾಗ ಯಶಸ್ಸು-ವಂ|ಆಲ್ಫ್ರೆಡ್:
ಅಧ್ಯಕ್ಷತೆ ವಹಿಸಿದ್ದ ಮಾೈದೆ ದೇವುಸ್ ಚರ್ಚ್ ಸಮೂಹ ಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಹೇಗೆ ಶೈಕ್ಷಣಿಕ ಜೀವನದಲ್ಲಿ ಪಾಠ ಹೇಗೆ ಮುಖ್ಯವೋ, ಹಾಗೆಯೇ ಆಟ ಕೂಡ ಜೀವನದ ಬಲುಮುಖ್ಯ ಅಂಗವಾಗಿದೆ. ಕ್ರೀಡೆಯಲ್ಲಿ ಪ್ರಾಮಾಣಿಕತೆ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡವನು ಜೀವನದಲ್ಲಿ ಯಶಸ್ಸಿನ ಗುರಿಯನ್ನು ತಲುಪುತ್ತಾನೆ. ಪ್ರಾಮಾಣಿಕತೆ, ಪ್ರೀತಿ ಹಾಗೂ ಸಹಬಾಳ್ವೆಯನ್ನು ನಾವು ಮೊದಲು ನಮ್ಮ ಮನೆಯಲ್ಲಿ ಮೈಗೂಡಿಸಿಕೊಂಡಾಗ ಮುಂದೆ ಸಮಾಜದಲ್ಲಿ ಅದನ್ನು ಮುಂದುವರೆಸಲು ಕಷ್ಟವಾಗದು. ಫಿಲೋಮಿನಾ ವಿದ್ಯಾಸಂಸ್ಥೆಯು ಪ್ರಣಮ್ಯ, ರಕ್ಷಾ, ನೀಲ್, ವೈಷ್ಣವ್‍ರಂತಹ ಹೆಮ್ಮೆಯ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋ, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ ಹಾಗೂ ರಾಜೇಶ್ ಮೂಲ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಥಸಂಚಲನದ ನಿರ್ಣಾಯಕರಾಗಿ ಫಿಲೋಮಿನಾ ಕಾಲೇಜ್‍ನ ಪದವಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ, ಸಂತ ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಐವಿ ಗ್ರೆಟ್ಟಾ ಪಾೈಸ್, ನರೇಶ್ ಲೋಬೋ, ಫಿಲೋಮಿನಾ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವರವರು ಸಹಕರಿಸಿದ್ದರು.

ಪ್ರದರ್ಶನ ಕಲಾ ವಿಭಾಗದ ನಿರ್ದೇಶಕಿ ಸುಮನಾ ಪ್ರಶಾಂತ್‍ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಂಶುಪಾಲ ವಂ|ವಿಜಯ್ ಲೋಬೊ ಸ್ವಾಗತಿಸಿ, ಆಂಗ್ಲ ವಿಭಾಗದ ಉಪನ್ಯಾಸಕಿ ಸುಮ ಡಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ರಾಹುಲ್ ಕೆ ಕಾರ್ಯಕ್ರಮ ನಿರೂಪಿಸಿದರು. ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ|ರಿತೇಶ್ ರೊಡ್ರಿಗಸ್, ವಂ|ಸುನಿಲ್ ಜಾರ್ಜ್ ಡಿ’ಸೋಜ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೊಡ್ರಿಗಸ್, ಫಿಲೋಮಿನಾ ಆಂಗ್ಲ ಮಾಯಮ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಹೆರಿ ಡಿ’ಸೋಜ, ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ಫಿಲೋಮಿನಾ ಕಾಲೇಜು ಮಹಿಳೆಯರ ಹಾಸ್ಟೆಲ್ ವಾರ್ಡನ್ ಸಿಸ್ಟರ್ ಫ್ಲೋರಾ ಮಚಾದೋ, ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕ್ರೀಡಾಜ್ಯೋತಿ ಮೆರವಣಿಗೆ….
ಆಕರ್ಷಕ ಪಥಸಂಚಲನದ ಬಳಿಕ ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ನೀಲ್ ಮಸ್ಕರೇನ್ಹಸ್(ಈಜು) ಹಾಗೂ ಪ್ರಣಮ್ಯ ಅಗಳಿ(ಯೋಗ)ರವರಲ್ಲದೆ ಕ್ರೀಡಾಪಟುಗಳಾದ ದಿಲನ್ ರೈ, ಲಿಖಿತ್ ಕೆ.ಎಸ್(ಫುಟ್‍ಬಾಲ್), ವೀರೇಶ್ ಎನ್.ವಿ(ಟೆನ್ನಿಕಾೈಟ್), ರಶ್ಮಿ ಜೆ.ಕೆ(ಟೇಬಲ್ ಟೆನ್ನಿಸ್), ಶಶಾಂಕ್ ಕೆ.ಎನ್, ಚೋಂದಮ್ಮ ಕೆ.ಬಿ(ಬ್ಯಾಡ್ಮಿಂಟನ್), ಶೈಫುಲ್ಲಾ ಖಾನ್(ಬೆಲ್ಟ್ ರೆಸ್ಲಿಂಗ್), ಹಿಮಾಶ್ರೀ ನಾೈಕ್(ಹಾಕಿ), ಭವಿತ್, ಪ್ರಣಮ್ಯ ಶೆಟ್ಟಿ, ನೇಹಾ, ತೇಜಸ್(ಅಥ್ಲೆಟಿಕ್ಸ್), ನಯನಾ(ಕರಾಟೆ)ರವರೊಂದಿಗೆ ರಾಷ್ಟ್ರಮಟ್ಟದ ಕ್ರೀಡಾಪಟು ರಕ್ಷಾ ಅಂಚನ್(ನಡಿಗೆ)ರವರು ಉರಿಸಿದ ಕ್ರೀಡಾಜ್ಯೋತಿಯೊಂದಿಗೆ ದಿವ್ಯ ಚೇತನಾ ಪ್ರಾರ್ಥನಾ ಮಂದಿರದಿಂದ ಕ್ರೀಡಾಂಗಣಕ್ಕೆ ಪ್ರವೇಶಿಸಿ, ಕ್ರೀಡಾಂಗಣಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಕ್ರೀಡಾಜ್ಯೋತಿಯನ್ನು ಮುಖ್ಯ ಅತಿಥಿ ಡಾ.ದೀಪಕ್ ರೈಯವರಿಗೆ ಹಸ್ತಾಂತರಿಸಿದರು. ಡಾ.ದೀಪಕ್ ರೈಯವರು ಕ್ರೀಡಾಜ್ಯೋತಿಯನ್ನು ಮೇಲಕ್ಕೆತ್ತಿ ಕ್ರೀಡೋತ್ಸವಕ್ಕೆ ಚಾಲನೆಯಿತ್ತರು. ಬಳಿಕ ಕ್ರೀಡಾಜ್ಯೋತಿಯನ್ನು ಕಾಲೇಜ್‍ನ ಸಿಲ್ವರ್ ಜ್ಯುಬಿಲಿ ಸಭಾಂಗಣದ ಮೇಲಿನ ಪೀಠದಲ್ಲಿ ಇರಿಸಿ ಉರಿಸಲಾಯಿತು.

ಪ್ರಥಮ ಇಸಿಬಿಎ (ಪ್ರ)..
ಆಕರ್ಷಕ ಪಥಸಂಚಲನದಲ್ಲಿ ಪ್ರಥಮ ಇಸಿಬಿಎ ವಿಭಾಗ(174 ಅಂಕ)ವು ಪ್ರಥಮ ಸ್ಥಾನವನ್ನು ಪಡೆದಿದ್ದು, ದ್ವಿತೀಯ ಎಸ್‍ಸಿಬಿಎ ವಿಭಾಗ(164)ವು ದ್ವಿತೀಯ ಸ್ಥಾನವನ್ನು ಮತ್ತು ಪ್ರಥಮ ಎಸ್‍ಇಬಿಎ `ಎ’ ವಿಭಾಗ(157)ವು ತೃತೀಯ ಸ್ಥಾನವನ್ನು ಗಳಿಸಿಕೊಂಡಿದೆ. ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಬ್ಯಾಂಡ್ ವಾದ್ಯ ತಂಡ ಸಹಿತ ಉಳಿದ 14 ತಂಡಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಮನೀಷ ಮಿನೇಜಸ್ ನೇತೃತ್ವದ ವಿದ್ಯಾರ್ಥಿಗಳ ಬ್ಯಾಂಡ್ ತಂಡ ಆಕರ್ಷಕ ಪಥಸಂಚಲನಕ್ಕೆ ವಿಶೇಷ ಮೆರುಗು ನೀಡಿತ್ತು.

ಆಕರ್ಷಕ ಪಥಸಂಚಲನ…
ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ವಿನೀತ್ ಜಿ.ಆರ್‍ಯವರ ಮುಂದಾಳತ್ವದಲ್ಲಿ ಕಾಲೇಜಿನ ಕ್ರೀಡಾಕೂಟದ ಧ್ವಜವನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೋಭಿತ್ ರೈ, ಕಾರ್ಯದರ್ಶಿ ಸತ್ಯಾತ್ಮ ಭಟ್, ಜೊತೆ ಕಾರ್ಯದರ್ಶಿ ಕ್ಯಾಲಿನ್ ಡಿ’ಸೋಜ, ಫ್ಲ್ಯಾಗ್ ಬ್ಯಾರರ್ಸ್‍ಗಳಾದ ಎನ್‍ಸಿಸಿಯ ಸೋಮಣ್ಣ, ಅರ್ವಿನ್ ಗೊನ್ಸಾಲ್ವಿಸ್, ಅಭಿಷೇಕ್, ಬಿಶನ್‍ರವರೊಂದಿಗೆ ನಂದನ್ ನೇತೃತ್ವದ ರೋವರ್ಸ್ ಮತ್ತು ರೇಂಜರ್ಸ್ ತಂಡ ಅಲ್ಲದೆ ಪ್ರಥಮ ಹಾಗೂ ದ್ವಿತೀಯ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಿಂದ ಒಟ್ಟು 17 ತಂಡಗಳು ಕೇಸರಿ, ಬಿಳಿ, ಹಸಿರು ಧ್ವಜದೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು. ಪಥಸಂಚಲನದಲ್ಲಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಭಾಗವಹಿಸಿದ್ದರು. ಬಳಿಕ ವಿನೀತ್ ಜಿ.ಆರ್‍ರವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.