ಡಿ.3: ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ

ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಡಿ.3 ರಂದು ಕಾಲೇಜಿನ ಪ್ರಾಂಗಣದಲ್ಲಿ ಜರಗಲಿದೆ.ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟಕ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ.ಮುರಲೀಮೋಹನ್ ಚೂಂತಾರುರವರು ಭಾಗವಹಿಸಲಿದ್ದಾರೆ. ಕಾಲೇಜಿನ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರು ಸಂತ ಆ್ಯಗ್ನೇಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾಗಿರುವ ಡಾ|ದೇವಿಪ್ರಭಾ ಆಳ್ವ, ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾ, ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ಇನ-ಚಾರ್ಜ್ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋರವರು ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಯಶ್ವಂತ್ ಎಂ.ಡಿ, ಉಷಾ ಯಶ್ವಂತ್, ಲವೀನಾ ಸಾಂತ್‍ಮಾಯೆರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೋಭಿತ್ ರೈ, ಕಾರ್ಯದರ್ಶಿ ಸತ್ಯಾತ್ಮ ಭಟ್, ಜೊತೆ ಕಾರ್ಯದರ್ಶಿ ಕ್ಯಾಲಿನ್ ಡಿ’ಸೋಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗಮಂಟಪ, ಇಂಟರ್‍ಲಾಕ್ ಪ್ರಾಂಗಣ ಉದ್ಘಾಟನೆ..
ಹಿರಿಯ ವಿದ್ಯಾರ್ಥಿನಿ ಹಾಗೂ ಮಂಗಳೂರು ಸಂತ ಆ್ಯಗ್ನೇಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ|ದೇವಿಪ್ರಭಾ ಆಳ್ವರವರ ರೂ.1.50 ಲಕ್ಷ ದೇಣಿಗೆಯಿಂದ ನಿರ್ಮಿಸಲಾದ ನೂತನ ರಂಗಮಂಟಪ ಮತ್ತು ಕಾಲೇಜಿನ ಹಾಗೂ ದಾನಿಗಳ ಸಹಕಾರದಿಂದ ನಿರ್ಮಾಣವಾದ ಸುಸಜ್ಜಿತ ಇಂಟರ್‍ಲಾಕ್ ಪ್ರಾಂಗಣದ ಉದ್ಘಾಟನೆ ಕಾರ್ಯಕ್ರಮ ಈ ಸಂದರ್ಭದಲ್ಲಿ ಜರಗಲಿದೆ.